ಜೇಡು -
ಶಿಲೆಗಳಲ್ಲಿರುವ ಫೆಲ್ಟ್‍ಸ್ಟಾರ್ ಮೊದಲಾದ ಅಲ್ಯುಮಿನೊ ಸಿಲಿಕೇಟ್ ಖನಿಜಗಳು ಶಿಥಿಲಹೊಂದಿ ರಾಸಾಯನಿಕ ಬದಲಾಣೆಗಳಿಗೆ ಒಳಗಾದಾಗ ದೊರೆಯುವ ಉತ್ಪನ್ನ (ಕ್ಲೇಸ್). ಕೆಲವೊಮ್ಮೆ ಆಳದಿಂದ ಹೊರ ಹೊಮ್ಮುತ್ತಿರುವ ಕಾದ ನೀರು, ಆವಿ ಮತ್ತು ಇತರ ಉಷ್ಣದ್ರವಗಳು ಶಿಲೆಯನ್ನು ಆವರಿಸಿ ಅದರಲ್ಲಿರುವ ಅಲ್ಯಮಿನೊ ಸಿಲಿಕೇಟ್ ಖನಿಜಗಳನ್ನು ರಾಸಾಯನಿಕ ಬದಲಾವಣೆಗೆ ಒಳಪಡಿಸಿದಾಗಲೂ ಜೇಡು ಉತ್ಪತ್ತಿಯಾಗುತ್ತದೆ. ವಾಸ್ತವವಾಗಿ ಜೇಡು ಖನಿಜವಲ್ಲ. ಹಲವಾರು ಖನಿಜಗಳ ಹಾಗೂ ಕಲಾಯ್ಡಲ್ ಕಣಗಳ ಸಮೂಹವದು. ಈ ಸಮೂಹದ ಸಂಯೋಜನಾ ಘಟಕಗಳು ಬಹು ಸೂಕ್ಷ್ಮ. ಇವು ಎಲೆಕ್ಟ್ರಾನ್ ಸೂಕ್ಷ್ಮ ದರ್ಶಕದ ಮೂಲಕ ವೀಕ್ಷಿಸಿದಾಗ ಸ್ಪಷ್ಟಗೊಳ್ಳುತ್ತವೆ. ಇಲ್ಲವೆ ಎಕ್ಸ್‍ಕಿರಣ ಅಥವಾ ಡಿ.ಟಿ.ಎ. (ವ್ಯತ್ಯಾಸಾತ್ಮಕ ಉಷ್ಣತಾವಿಶ್ಲೇಷಣೆ) ವಿಧಾನಗಳಿಂದಲೂ ಇವನ್ನು ಗುರುತಿಸಲು ಸಾಧ್ಯ. ಹೀಗೆ ಗುರುತಿಸಿರುವ ಖನಿಜಗಳು ಈ ಮುಂದಿನವು.

	I ಕಯೊಲಿನೈಟ್ ಸಮೂಹ : ಕಯೊಲಿನೈಟ್, ಡಿಕೈಟ್, ನ್ಯಾಕ್ರೈಟ್, ಅನೌಕ್ಸೈಟ್, ಹ್ಯಾಲಾಯ್‍ನೈಟ್, ಎಂಡೆಲೈಟ್.
II ಮಾಂಟ್‍ಮೊರಿಲೊನೈಟ್ ಸಮೂಹ : ಮಾಂಟ್‍ಮೊರಿಲೊನೈಟ್, ನಾನ್ ಟ್ರೊನೈಟ್, ನ್ಯಾಪೊನೈಟ್, ಬೀಡೆಲೈಟ್, ಹೆಕ್ಟೊರೈಟ್.
III ಜಲೀಯ ಮೈಕಾಗಳು : ಇಲ್ಲೈಟ್
Iಗಿ ಇತರೆಯವು : ಅಟ್ಟಾಪಲ್ಗೈಟ್, ಸೆಪಿಯೊಲ್ಯಟ್, ಆ್ಯಲೊಫೇನ್.

	ಮೊದಲನೆಯ ಗುಂಪಿನ ಕಯೊಲಿನೈಟ್ ಮುಂತಾದವು ಸುದ್ದೆಮಣ್ಣು ಹಾಗೂ ವಿವಿಧ ಬಗೆಯ ಮಣ್ಣುಗಳಲ್ಲೂ ಎರಡನೆಯ ವರ್ಗದ ಮಾಂಟ್ಮೊರಿಲೊನ್ಯಟ್ ಮುಂತಾದವು ಶಿಥಿಲೀಕರಣಕ್ಕೆ ಒಳಗಾಗಿರುವ ಸಿರಗಳು ಮತ್ತು ವಿವಿಧ ಮಣ್ಣುಗಳಲ್ಲೂ ಇಲ್ಲೈಟ್ ಸಮುದ್ರೀಯ ಜೇಡು ಮತ್ತು ಹಲವು ಬಗೆಯ ಮಣ್ಣುಗಳಲ್ಲೂ ಅಟ್ಟಾಪಲ್ಗೈಟ್ ಮುಂತಾದವು ಫುಲ್ಲರ್ ಮಣ್ಣು ಹಾಗೂ ಸಾಮಾನ್ಯ ಜೇಡುಗಳಲ್ಲೂ ಕಂಡುಬರುತ್ತವೆ. ಇವುಗಳ ಪೈಕಿ ಕಯೋಲಿನ್ಯೆಟ್, ಅನೌಕ್ಸೈಟ್, ಹ್ಯಾಲಾಯ್‍ನೈಟ್, ಎಂಡೆಲೈಟ್, ಮಾಂಟ್‍ಮೊರಿಲೊನೈಟ್, ಆ್ಯಲೊಫೇನ್ ಇತ್ಯಾದಿ ಖನಿಜಗಳು ಶಿಲೆಯ ಶಿಥಿಲೀಕರಣದಿಂದಲೂ ಡಿಕೈಟ್, ನ್ಯಾಕ್ರೈಟ್, ನಾನ್‍ಟ್ರೊನ್ಯೆಟ್, ಸ್ಯಾಪೊನೈಟ್, ಬೀಡೆಲೈಟ್ ಮುಂತಾದವು ಜಲೋಷ್ಣಕ್ರಿಯೆಯಿಂದಲೂ ರೂಪುಗೊಳ್ಳುತ್ತವೆ. ಜೇಡು ಖನಿಜಗಳು ತಮ್ಮ ಆಕಾರದಲ್ಲಿ ಪದರು. ಪಟ್ಟಿಕೆ, ನಳಿಕೆ ಅಥವಾ ನಾರು ನಾರಾಗಿಯೂ ಇರುತ್ತವೆ. ಜೇಡಿಮಣ್ಣಿನಲ್ಲಿ ಕೇವಲ ಈ ಖನಿಜಗಳೇ ಇರದೆ ಇವುಗಳೊಡನೆ ಕ್ವಾರ್ಟ್, ಫೆಲ್ಡ್‍ಸ್ಪಾರುಗಳು, ಆಗೈಟ್, ಹಾರ್ನ್‍ಬ್ಲೆಂಡ್, ಮೈಕಾ, ರೂಟೈಲ್, ಟೂರ್ಮಲಿನ್, ಕ್ಯಾಲ್ಸೈಟ್, ಜಿಪ್ಸಮ್, ಮ್ಯಾಗ್ನಟೈಟ್, ಹಿಮಟೈಟ್ ಇತ್ಯಾದಿಗಳು ಬೆರೆತಿರುತ್ತವೆ. ಸಿಲಿಕಾಂಶ ಅಲ್ಪಪ್ರಮಾಣದಲ್ಲಿದ್ದರೆ ಅದರಿಂದ ಜೇಡಿನ ಗುಣಕ್ಕೆ ಯಾವ ಹಾನಿಯೂ ಇಲ್ಲ. ಕಬ್ಬಿಣಾಂಶದ ಖನಿಜಗಳು ಅದರ ಬಣ್ಣಕ್ಕೆ ಮೂಲಕಾರಣ. ಹಾಗೂ ಅದರ ಸ್ರಾವಶಕ್ತಿಗೂ ಇವೇ ಮೂಲಾಧಾರ. ಆದರೆ ಸುಣ್ಣಾಂಶವಿದ್ದಲ್ಲಿ ಅದು ಉತ್ತಮ ಜೇಡೆನಿಸಲಾರದು. ಇವೇ ಅಲ್ಲದೆ ಜೇಡುಮಣ್ಣಿನಲ್ಲಿ ಸಾಮಾನ್ಯವಾಗಿ ಕ್ಷಾರೀಯ ಧಾತುಗಳಿರುವುವು. ಜೇಡನ್ನು ಉಷ್ಣಕ್ಕೆ ಒಡ್ಡಿದಾಗ ಅದು ಗಾಜಿನಂತಾಗಲು ಈ ಧಾತುಗಳನ್ನು ಸಹಾಯಕವಾಗಿವೆ. ಜೇಡಿಮಣ್ಣಿನ ನಮ್ಯತೆ, ಸರಂಧ್ರ್ರತೆ, ಕುಗ್ಗುವಿಕೆ-ಈ ಮೊದಲಾದ ಗುಣಗಳು ಅದರ ಕಣಗಳ ಗಾತ್ರ ಹಾಗೂ ವಿನ್ಯಾಸವನ್ನು ಅವಲಂಬಿಸಿವೆ. ಕ್ವಾಟ್ರ್ಸ್ ಖನಿಜಗಳು ಜೇಡಿನ ನಮ್ಯತೆ ಮತ್ತು ಕುಗ್ಗುವಿಕೆಯನ್ನು ತಗ್ಗಿಸಿ ಅದರ ಉಷ್ಣ ನಿರೋಧಕಶಕ್ತಿಯನ್ನು ವೃದ್ಧಿಗೊಳಿಸುತ್ತವೆ. ಆದರೆ ಇದೇ ಖನಿಜ ಕಲಾಯ್ಡಲ್ ರೂಪದಲ್ಲಿದ್ದಲ್ಲಿ ಜೇಡಿನ ನಮ್ಯತೆ ಉತ್ತಮಗೊಳ್ಳುತ್ತದೆ. ಫೆಲ್ಡ್‍ಸ್ಪಾರ್ ಹಾಗೂ ಕಬ್ಬಿಣದ ಆಕ್ಸೈಡುಗಳು ಜೇಡಿನ ಕರಗುಬಿಂದುವನ್ನು ತಗ್ಗಿಸುವುದೇ ಅಲ್ಲದೆ ಸ್ರಾವಕ ಘಟಕಗಳಾಗಿಯೂ ಕಾರ್ಯಾಚರಣೆಯನ್ನು ನಡೆಸುತ್ತವೆ.

	ಜೇಡು ಉತ್ಪತ್ತಿಯಾದ ವಿಧಾನವನ್ನು ಅನುಸರಿಸಿ ರೀಸ್ ಎಂಬಾತ ಎರಡು ಬಗೆಯ ಜೇಡುನಿಕ್ಷೇಪಗಳನ್ನು ಗುರುತಿಸಿದ್ದಾನೆ :

	1 ಪ್ರಾಥಮಿಕ ಅಥವಾ ಶೇಷ ಜೇಡು ನಿಕ್ಷೇಪಗಳು : ಇವು ಮೂಲಶಿಲೆಯ ಶಿಥಿಲೀಕರಣದಿಂದ ಉತ್ಪತ್ತಿಯಾಗಿ ಸ್ಥಳದಲ್ಲೇ ನಿಕ್ಷೇಪಗೊಂಡಿರುತ್ತವೆ. ಹೀಗಾಗಿ ಇವು ಇತರ ವಸ್ತುಗಳೊಡನೆ ಬೆರೆಯುವ ಅವಕಾಶಗಳು ಕಡಿಮೆ. ಜೇಡಿನ ಪರಿಶುದ್ಧತೆಯೂ ಉತ್ತಮ ಮಟ್ಟದಲ್ಲಿರುತ್ತದೆ.

	2 ದ್ವಿತೀಯಕ ಅಥವಾ ಸ್ಥಳಾಂತರ ಜೇಡು ನಿಕ್ಷೇಪಗಳು : ಜೇಡು ತನ್ನ ಮೂಲಸ್ಥಾನದಿಂದ ಇತರೆಡೆಗಳಿಗೆ ಒಯ್ಯಲ್ಪಡುವಾಗ ಸಾಮಾನ್ಯವಾಗಿ ಇತರ ವಸ್ತುಗಳೊಡನೆ ಬೆರೆತು ಕಲುಷಿತಗೊಳ್ಳುತ್ತದೆ. ಸಾಗಾಣಿಕೆಯ ರೀತಿಯನ್ನು ಅನುಸರಿಸಿ ಸಮುದ್ರೀಯ, ಸಾಗರೀಯ, ಪ್ರವಾಹಜನ್ಯ, ನೀರ್ಗಲ್ಲು ಪ್ರವಾಹ ಜನ್ಯ, ಪವನಜನ್ಯ-ಹೀಗೆ ಹಲವಾರು ಉಪವರ್ಗಗಳನ್ನು ಗುರುತಿಸಲಾಗಿದೆ.

ಉಪಯೋಗದ ಗುಣಗಳ ಆಧಾರದ ಮೇಲೆ ಜೇಡುನಿಕ್ಷೇಪಗಳ ವರ್ಗೀಕರಣವನ್ನು ಹೀಗೆ ಸೂಚಿಸಿದ್ದಾರೆ : ಕಯೊಲಿನ್ -ಚೀನಾಜೇಡು; ಕಾಗದಜೇಡು; ಚಂಡುಜೇಡು; ಬೆಂಕಿಜೇಡು, ಇಟ್ಟಿಗೆಜೇಡು; ಔಷಧೀಯ ಜೇಡು ಇತ್ಯಾದಿ. ಪ್ರಾಥಮಿಕ ಜೇಡು ಬಣ್ಣದಲ್ಲಿ ಬಿಳುಪಾಗಿದ್ದರೂ ದ್ವಿತೀಯಕ ಜೇಡಿಗಿಂತ ನಮ್ಯತೆ ಹಾಗೂ ಉಷ್ಣನಿರೋಧಕ ಗುಣಗಳಲ್ಲಿ ಉತ್ತಮವೆನಿಸುವುದಿಲ್ಲ.

	ಜೇಡುನಿಕ್ಷೇಪಗಳ ಗಣಿಕೆಲಸ : ದೊಡ್ಡ ದೊಡ್ಡ ಚೌಕಾಕಾರದ ಗುಳಿಗಳನ್ನು ತೋಡಿ ನೆಲದಲ್ಲಿ ಹುದುಗಿರುವ ಜೇಡಿಮಣ್ಣು ಅಥವಾ ಸುದ್ದೆಮಣ್ಣನ್ನು ಹೊರತೆಗೆಯುತ್ತಾರೆ. ಆಳವನ್ನು ಅನುಸರಿಸಿ ಕೂಪಗಳನ್ನು ತೋಡುವ ರೀತಿಯನ್ನು ಮಾರ್ಪಡಿಸಲಾಗುತ್ತದೆ. ಸಾಮಾನ್ಯವಾಗಿ ಹಾರೆ, ಗುದ್ದಲಿ, ಪಿಕಾಸಿಗಳಿಂದ ಅಗೆದು ಜೇಡನ್ನು ಹೊರಸಾಗಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಜೇಡು ಹುದುಗಿರುವ ಶಿಲೆಗಳ ಮೇಲೆ ರಭಸವಾಗಿ ನೀರನ್ನು ಬಿಟ್ಟು ಬೇರ್ಪಡಿಸಿ ಶೇಖರಿಸುತ್ತಾರೆ. ಇನ್ನು ಕೆಲವು ವೇಳೆ ಜೇಡು ಹುದುಗಿರುವ ಶಿಲೆಯನ್ನು ಕುಟ್ಟಿ ಪುಡಿಮಾಡುತ್ತಾರೆ. ತರುವಾಯ ಅದರ ಮೇಲೆ ನೀರನ್ನು ಹಾಯಿಸುತ್ತಾರೆ. ಜೇಡು ಹಾಗೂ ಶಿಲೆಯ ಇತರ ವಸ್ತುಗಳು ಕರಗಿ ಉಂಟಾದ ಕೆಸರನ್ನು ದೊಡ್ಡ ದೊಡ್ಡ ಮರಳಿನ ಕುಣಿ ಅಥವಾ ಪಾತಿಗಳ ಮೂಲಕ ಹಾಯಿಸಿದಾಗ ಮರಳು ಅಲ್ಲೇ ಶೇಖರಗೊಂಡು ಕೆಸರು ಹೊರ ಹರಿಯುತ್ತದೆ. ಕೆಸರನ್ನು ನೀರಿನಲ್ಲಿ ಜಾಲಿಸಿ ಅಥವಾ ಜರಡಿ ಹಿಡಿದು ಕಳಪೆವಸ್ತುಗಳನ್ನು ಬೇರ್ಪಡಿಸುತ್ತಾರೆ. ಜೇಡನ್ನು ನೀರಿನಲ್ಲಿ ಕರಗಿಸದೆ ಗಾಳಿಯಲ್ಲಿ ತೂರಿ ಕಳಪೆವಸ್ತುಗಳನ್ನು ಬೇರ್ಪಡಿಸುವುದೂ ಸಾಧ್ಯ. ಕೆಲವು ಸಂದರ್ಭಗಳಲ್ಲಿ ಕೆಸರಿನ ಮೂಲಕ ವಿದ್ಯುತ್ತನ್ನು ಹಾಯಿಸಿ ಅಥವಾ ರಾಸಾಯನಿಕ ವಸ್ತುಗಳನ್ನು ಬೆರೆಸಿ ಜೇಡಿನೊಡನೆ ಬೆರೆತಿರುವ ಕಶ್ಮಲಗಳನ್ನು ಬೇರ್ಪಡಿಸುತ್ತಾರೆ. ಜೇಡಿನೊಡನೆ ಬೆರೆತಿರುವ ಕಾಗೆಬಂಗಾರದ ಸಣ್ಣಪುಟ್ಟ ರೇಕುಗಳನ್ನು ಬೇರ್ಪಡಿಸಲು ಇರುವ ವಿಧಾನವೇ ಬೇರೆ ರೀತಿಯದು. ಜೇಡು ಕರಗಿರುವ ಕೆಸರು ನೀರನ್ನು ಉದ್ದ ಹಾಗೂ ಕಿರಿದಾದ ದೋಣಿಗಳ ಮೂಲಕ ಮಂದಗತಿಯಲ್ಲಿ ಹರಿಯಬಿಡುತ್ತಾರೆ. ಈ ದೋಣಿಗಳು ಮಟ್ಟಸವಾಗಿರುವುದಿಲ್ಲ; ಬದಲು ಕೊಂಚ ಇಳಿಜಾರಿನಿಂದ ಕೂಡಿರುತ್ತವೆ. ನೀರು ನಿಧಾನವಾಗಿ ಹರಿಯುವಾಗ ಮರಳಿನ ಕಣಗಳು ತಳದಲ್ಲಿ ಶೇಖರಗೊಳ್ಳುತ್ತವೆ. ಆದರೆ ಕಾಗೆಬಂಗಾರದ ರೇಕುಗಳು ಮೇಲೆಮೇಲೆಯೇ ತೇಲಿ ಬರುತ್ತವೆ. ಹೀಗೆ ಶೇಖರವಾದ ಕೆಸರು ನೀರನ್ನು ಮತ್ತೆ ಇದೇ ಬಗೆಯ ದೋಣಿಗಳ ಮೂಲಕ ಹಾಯಿಸಿ ಸೂಕ್ಷ್ಮರಂಧ್ರಗಳಿಂದ ಕೂಡಿದ ಜಾಲರಿಗಳ ಮೂಲಕ ಹುದುಗಿಸಿದಾಗ ಕಾಗೆಬಂಗಾರದ ಸೂಕ್ಷ್ಮಪದರುಗಳು ರಂಧ್ರಗಳ ಮೂಲಕ ಹಾದುಹೋಗಲಾರದೆ ಅಲ್ಲೇ ಶೇಖರಗೊಳ್ಳುತ್ತವೆ. ಈಗ ಅವನ್ನು ಬೇರ್ಪಡಿಸುವುದು ಸುಲಭ. ಈ ರೀತಿ ಶುದ್ಧೀಕರಿಸಿದ ಕೆಸರನ್ನು ಸಿಮೆಂಟಿನ ದೊಡ್ಡ ದೊಡ್ಡ ತೊಟ್ಟಿಗಳಲ್ಲಿ ಶೇಖರಿಸಿ ಹಲವು ಗಂಟೆಗಳ ಕಾಲ ಬಿಟ್ಟಲ್ಲಿ ಜೇಡೆಲ್ಲವೂ ತಳದಲ್ಲಿ ಶೇಖರಗೊಂಡು ಮೇಲೆ ತಿಳಿಯಾದ ನೀರು ಬೇರ್ಪಡುತ್ತದೆ. ಇದನ್ನು ಹೊರತೆಗೆದು ಜೇಡಿನ ಹಸಿ ನಿಕ್ಷೇಪವನ್ನು ಒಣಗಿಸಿದಾಗ ನಯವಾದ ಸುದ್ದೆ ಮಣ್ಣು ದೊರೆಯುತ್ತದೆ. ಉಷ್ಣದೇಶಗಳಲ್ಲಿ ಬಿಸಿಲಿಗೆ ಬರವಿಲ್ಲ. ಹೀಗಾಗಿ ಒಣಗಿಸುವ ವಿಧಾನ ಶ್ರಮಪೂರಿತವಲ್ಲ. ಆದರೆ ಬಿಸಿಲಿನ ಅಭಾವವಿರುವ ಶೀತದೇಶಗಳಲ್ಲಿ ಯಾಂತ್ರಿಕ ವಿಧಾನದ ಮೂಲಕ ಜೇಡಿನ ದೂಳನ್ನು ಪಡೆಯುತ್ತಾರೆ.

	ಮುಖ್ಯ ಜೇಡುನಿಕ್ಷೇಪಗಳು : ಇಂಗ್ಲೆಂಡಿನ ಕಾರ್ನವಾಲ್ ಮತ್ತು ಡೆವಾನ್ ಷೈರಿನ ಜೇಡುನಿಕ್ಷೇಪಗಳು ಬಹು ಪ್ರಸಿದ್ಧವಾದವು. ಈ ಪ್ರದೇಶದ ಗ್ರ್ಯಾನೈಟ್ ಜಲೋಷ್ಣಕ್ರಿಯೆಗಳಿಗೆ ಒಳಗಾಗುವುದರ ಮೂಲಕ ಉತ್ತಮ ಜೇಡುನಿಕ್ಷೇಪಗಳು ಉತ್ಪತ್ತಿಯಾಗಿವೆ. ಕೆಲವು ಗಣಿಗಳು 300 ಅಡಿಗಳ ಆಳವನ್ನೂ ಮುಟ್ಟಿವೆಯೆಂದರೆ ಈ ಕ್ರಿಯೆಯ ವ್ಯಾಪ್ತಿ ಅರ್ಥವಾಗುತ್ತದೆ.

	ಹೀಗೆಯೇ ಚೆಕೊಸ್ಲೊವಾಕಿಯದ ಸುದ್ದೆಮಣ್ಣಿನ ನಿಕ್ಷೇಪಗಳು ಇಡೀ ಯೂರೋಪು ಖಂಡದಲ್ಲೇ ಹೆಸರುವಾಸಿ. ಇಲ್ಲಿಯ ಜೆಟ್‍ಲಿಟ್ಸ್ ಮತ್ತು ಪಿಲ್ಸನ್ ನಿಕ್ಷೇಪಗಳನ್ನು ಹೆಸರಿಸಲೇಬೇಕು. ಜೆಟ್‍ಲಿಟ್ಸ್ ಪ್ರಾಂತ್ಯದ ಇಳಕಲು ಪ್ರದೇಶವೊಂದರಲ್ಲಿ ಲಿಗ್ನೈಟ್ ಹಾಗೂ ಬೆಸಾಲ್ಟ್ ಲಾವಾಸ್ತರಗಳ ಟರ್ಷಿಯರಿ ಯುಗದ ನಿಕ್ಷೇಪಗಳ ಅಡಿಯಲ್ಲಿ ಸುಮಾರು 18ಮೀ ಆಳದವರೆಗೆ ಕಯೊಲಿನ್ (ಸುದ್ದೆಮಣ್ಣು) ವ್ಯಾಪಿಸಿರುವುದು ಗೋಚರವಾಗಿದೆ. ಸಾಮಾನ್ಯ ಶಿಥಿಲೀಕರಣ ಹಾಗೂ ಲಿಗ್ನೈಟ್ ಮೂಲಕ ಸ್ರವಿಸಿದ ದ್ರಾವಣಗಳು ಕಯೊಲಿನೀಕರಣಕ್ಕೆ ಮುಖ್ಯಕಾರಣವೆನಿಸಿವೆ. ಪಿಲ್ಸನ್ ಪ್ರದೇಶದಲ್ಲಿ ಕಾರ್ಬಾನಿಫೆರಸ್ ಯುಗಕ್ಕೆ ಸೇರಿದ ಫೆಲ್ಡ್‍ಸ್ಪಾತಿಕ್ ವಸ್ತುವಿನಿಂದಾದ ಆರ್ಕೋಸಿಕ್ ಮರಳುಶಿಲೆಗಳೇ ಕಯೊಲಿನ್ನಿನ ಉತ್ಪತ್ತಿಗೆ ಮೂಲ ಆಗರವೆನಿಸಿವೆ. ಇಲ್ಲಿಯ ಸುದ್ದೆಮಣ್ಣು ಬಲುಶ್ರೇಷ್ಠ ದರ್ಜೆಯದು. ಈ ನಿಕ್ಷೇಪದ ಮೇಲೆ ವ್ಯಾಪಿಸಿರುವ ಪೀಟಿನ ಶಿಥಿಲೀಕರಣದಿಂದ ಸ್ರವಿಸಿದ ದ್ರಾವಣಗಳೇ ಕಯೊಲಿನ್ನಿನ ಉತ್ಪತ್ತಿಗೆ ಮೂಲ ಕಾರಣವೆನಿಸಿವೆ. ಜರ್ಮನಿಯ ಸ್ಯಾಕ್ಸನಿ ಮತ್ತು ಮತ್ತು ಬವೇರಿಯ ಪ್ರಾಂತ್ಯಗಳಲ್ಲೂ ಉತ್ತಮ ನಿಕ್ಷೇಪಗಳಿವೆ. ಇಲ್ಲಿಯೂ ಸಸ್ಯಾಂಗಾರದ ಸ್ತರಗಳ ಮೂಲಕ ಸ್ರವಿಸಿದ ಆಮ್ಲೀಯ ದ್ರಾವಣಗಳು ಕಯೊಲಿನಿನ ಉತ್ಪತ್ತಿಗೆ ಮೂಲಕಾರಣವಾಗಿವೆ. ಚೀನದಲ್ಲೂ ಬಲು ದೊಡ್ಡ ಸುದ್ದೆಮಣ್ಣಿನ ನಿಕ್ಷೇಪಗಳಿವೆ. ಇಲ್ಲಿಯ ಚಿಮೆನ್ ಪ್ರಾಂತ್ಯದ ಸುದ್ದೆಮಣ್ಣು ಅತ್ಯುತ್ತಮವಾದುದು. ಇದರಿಂದ ಮಾಡುವ ಪಿಂಗಾಣಿ ಸಾಮಾನುಗಳು ಪ್ರಪಂಚದಲ್ಲೇ ಹೆಸರುವಾಸಿಯಾದವು. ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ ಉತ್ತರ ಕ್ಯಾರೊಲೈನ, ವರ್ಜೀನ್ಯ ಮತ್ತು ಜಾರ್ಜಿಯ ಪ್ರಾಂತ್ಯಗಳಲ್ಲಿ ಉತ್ತಮ ಬಿಳಿಜೇಡು ನಿಕ್ಷೇಪಗಳಿವೆ. ಇವು ಬಲು ಮಟ್ಟಿಗೆ ಪೆಗ್ಮಟೈಟ್ ಒಡ್ಡುಗಳಲ್ಲಿ ಉತ್ಪತ್ತಿಯಾದವು. ಭಾರತದ ಹಲವಾರು ರಾಜ್ಯಗಳಲ್ಲಿ ಸಾಕಷ್ಟು ಉತ್ತಮ ದರ್ಜೆಯ ಜೇಡು ಹಾಗೂ ಸುದ್ದೆಮಣ್ಣಿನ ನಿಕ್ಷೇಪಗಳಿವೆ. ಬೆಂಗಳೂರು, ಹಾಸನ, ತುಮಕೂರು, ಬಳ್ಳಾರಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಉತ್ತಮ ದರ್ಜೆಯ ಸುದ್ದೆಮಣ್ಣಿನ ನಿಕ್ಷೇಪಗಳುಂಟು. ಬಳ್ಳಾರಿ ಜಿಲ್ಲೆಯ ಹಾಲುವಾಗಲು ಬಳಿಯ ನಿಕ್ಷೇಪ ಬಲು ವಿಸ್ತಾರವಾಗಿದೆ. ಇದು ನೆಲಮಟ್ಟಿದಿಂದ ಇಪ್ಪತ್ತು ಅಡಿ ಆಳದ ವರೆಗೆ ವ್ಯಾಪಿಸಿದೆ. ಇಲ್ಲಿ ಸುಮಾರು 1,80,000 ಟನ್ ಬಿಳಿಜೇಡು ಸಿಗಬಹುದು. ಹರಪ್ಪನಹಳ್ಳಿಯ ಕೊಂಗನ ಹೊಸೂರು ಬಳಿ ಸುಮಾರು 1,00,000 ಟನ್ನುಗಳ ಮತ್ತೊಂದು ಭಾರಿ ನಿಕ್ಷೇಪವಿದೆ. ಬೆಂಗಳೂರು ಜಿಲ್ಲೆಯ ಗೊಲ್ಲಹಳ್ಳಿ, ಯಶವಂತಪುರ, ಪೀಣ್ಯ, ಮುತ್ತಾನಲ್ಲೂರು, ಸೋಲದೇವನಹಳ್ಳಿ, ನಂದಗುಡಿ ಮುಂತಾದೆಡೆಗಳಲ್ಲಿ ಸುದ್ದೆ ಹಾಗೂ ಜೇಡಿಮಣ್ಣು ದೊರೆಯುತ್ತವೆ. ಹಾಸನಜಿಲ್ಲೆಯ ಬಾಗೇಶಪುರ, ನಂದಿಹಳ್ಳಿಯ ಸುತ್ತಲ ಪ್ರದೇಶಗಳಲ್ಲಿ ಸುಮಾರು 2,50,000 ಟನ್ನುಗಳಷ್ಟು ಸುದ್ದೆಮಣ್ಣು ದೊರೆಯುವ ನಿರೀಕ್ಷೆ ಉಂಟು. ಅಲ್ಲದೆ ಕಾರವಾರ ಜಿಲ್ಲೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರಗಳ ಸುತ್ತಮುತ್ತ ಗಣಿಕೆಲಸಕ್ಕೆ ಯೋಗ್ಯವಾದ ಹಲವಾರು ನಿಕ್ಷೇಪಗಳಿವೆ.

	ಉಪಯೋಗಗಳು : ಜೇಡಿಮಣ್ಣಿನ ಉಪಯೋಗಗಳು ಹಲವಾರು. ಇವುಗಳಲ್ಲಿ ಕೆಲವನ್ನು ಮಾತ್ರ ಹೆಸರಿಸಲಾಗಿದೆ. ದಿನಬಳಕೆಯ ಮಡಿಕೆ, ಕುಡಿಕೆಗಳು, ಇಟ್ಟಿಗೆ ಹೆಂಚು ಇವುಗಳ ತಯಾರಿಕೆಗಂತೂ ಜೇಡು ಬಹು ಅವಶ್ಯಕ. ಉತ್ತಮ ದರ್ಜೆಯ ಸುದ್ದೆಮಣ್ಣನ್ನು ದ್ರವಬಣ್ಣಗಳು, ವಿದ್ಯುದುಪಕರಣಗಳು, ಶಾಖ ನಿರೋಧಕ ಇಟ್ಟಿಗೆಗಳು, ಕಾಗದ, ಕುಂಭಕಲೆ, ಪಿಂಗಾಣಿ ಸಾಮಾನುಗಳು ಇವುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಸುದ್ದೆಮಣ್ಣಿಗೆ ಹಲವಾರು ಔಷಧೀಯ ಗುಣಗಳೂ ಉಂಟು.		(ಬಿ.ವಿ.ಜಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ